ಕ್ರೈಸ್ತಮಠ

ಸಾಮಾನ್ಯವಾಗಿ ಕ್ರೈಸ್ತವಿರಕ್ತರು ಇರುವ ಸ್ಥಳಕ್ಕೆ ಈ ಹೆಸರಿದೆ. ಕ್ರಮೇಣ ಆಬಟ್ (ಮಠಾಧಿಪತಿ) ಅಥವಾ ಆಬೆಸ್ (ಸಂನ್ಯಾಸಿನಿ) ಅಧಿಕಾರಕ್ಕೊಳಪಟ್ಟವಕ್ಕೆ ಮಾತ್ರ ಕ್ರೈಸ್ತಮಠ(ಆಬೆ) ಎಂಬ ಹೆಸರು ಉಳಿದು ಬಂತು. ಕ್ರೈಸ್ತಮಠಯೆನಿಸಿಕೊಳ್ಳಬೇಕಾದರೆ ಅದು ಸ್ವಯಮಾಡಳಿತ ಸಂಸ್ಥೆಯಾಗಿದ್ದ ಧರ್ಮಸಭೆಯ ನಿಯಮಾವಳಿಯನುಸಾರ ಸ್ಥಾಪಿತವಾಗಿರಬೇಕು. ಅದರಲ್ಲಿಯ ಸಂನ್ಯಾಸಿಗಳ ಸಂಖ್ಯೆ ಹನ್ನೆರಡಕ್ಕೆ ಕಡಿಮೆ ಇರಬಾರದು. ಮೊದಮೊದಲು ಮಠದ ಸ್ಥಾಪಕನ ಅಥವಾ ಮಠವಿದ್ದ ಪ್ರದೇಶದ ಅಥವಾ ಮಠದ ಪ್ರತಿಷ್ಠಿತ ಸಂನ್ಯಾಸಿಯೊಬ್ಬನ ಹೆಸರೇ ಮಠಕ್ಕೂ ಇರುತ್ತಿತ್ತು. ಅನಂತರ ಕ್ರೈಸ್ತಸಂತನೊಬ್ಬನ ಹೆಸರನ್ನು ಮಠಕ್ಕೆ ಕೊಡುವ ರೂಢಿ ಪ್ರಾರಂಭವಾಯಿತು.

	ಪ್ರಾರಂಭದಲ್ಲಿ ಸಂನ್ಯಾಸಿಗಳು ಸಾಮಾನ್ಯವಾಗಿ ನಿಸರ್ಗದತ್ತ ಗವಿಗಳನ್ನೋ ಶ್ಮಶಾನದ ಗೋರಿಗಳನ್ನೋ ಸ್ವಯಂನಿರ್ಮಿತ ಗುಡಿಸಲುಗಳನ್ನೋ ತಮ್ಮ ವಾಸಸ್ಥಾನವನ್ನಾಗಿ ಆರಿಸುತ್ತಿದ್ದರು. ಕೆಲವರು ನಗರಗಳಲ್ಲಿಯೇ ಮಠಗಳನ್ನು ಸ್ಥಾಪಿಸಿದ ದೃಷ್ಟಾಂತಗಳೂ ಇವೆ. ಕೆಲವೊಮ್ಮೆ ನಿರ್ಜನವಾಗಿದ್ದ ಮಠದ ಪ್ರದೇಶಗಳು ಶಿಷ್ಯವರ್ಗದ ನೆಲಸುವಿಕೆಯಿಂದಾಗಿ ಜನನಿಬಿಡಪ್ರದೇಶಗಳಾದ ನಿದರ್ಶನಗಳಿವೆ. ನಿದರ್ಶನವಾಗಿ ವೆಸ್ಟ್ ಮಿನ್ಸ್ಟರ್ ಆಬೆಯನ್ನು ನೋಡಬಹುದು. 616ರ ಸುಮಾರಿಗೆ ಕೇವಲ ಒಂದು ಸಣ್ಣ ಮಠವಿದ್ದ ಜಾಗದಲ್ಲಿ ಈಗ ಬಹುಸುಂದರವಾದ ಗಾಥಿಕ್ ಭವನವೊಂದು ನಿರ್ಮಿತವಾಗಿದೆ.

	ಕ್ರೈಸ್ತಧರ್ಮ ಪೂರ್ವದಲ್ಲಿಯೇ ಯೆಹೂದ್ಯರಲ್ಲಿ ಎಸ್ಸೇನೀಸ್ ಎಂಬ ಸಂನ್ಯಾಸಿಗಳ ಮಠಗಳು ಇದ್ದುವೆಂದು ತಿಳಿದುಬಂದಿದೆ. ಕ್ರೈಸ್ತಧರ್ಮದ ಅತ್ಯಂತ ಪುರಾತನ ಮಠಗಳ ಉಗಮ ಹೀಗಿದೆ: ಯಾವನಾದರೊಬ್ಬ ಸನ್ಯಾಸಿ ನಿರ್ಜನಪ್ರದೇಶದಲ್ಲಿ ಜಪ ಧ್ಯಾನ ತಪಸ್ಸಿನಲ್ಲಿ ನಿರತನಾಗಿದ್ದುದನ್ನು ಕಂಡಾಗ ಜನ ಆಕರ್ಷಿತರಾಗಿ ಆತನ ಸಂದೇಶ, ಉಪದೇಶ ಮತ್ತು ಜೀವನದ ರೀತಿನೀತಿಗಳನ್ನು ಅರಿತು ಅನುಸರಿಸಲು ಅವನ ಸುತ್ತಲೂ ಸೇರುತ್ತಿದ್ದರು. ಯಾವ ನಿಶ್ಚಿತಯೋಜನೆಯೂ ಇಲ್ಲದೆ ಮೂಲ ಗುಡಿಸಲಿನ ಸುತ್ತಲು ಇತರ ಗುಡಿಸಲುಗಳನ್ನು ನಿರ್ಮಿಸುತ್ತಿದ್ದರು. ಹೀಗೆ ಸೇರಿದ ಶಿಷ್ಯರ ಸಂಖ್ಯೆ ಬೆಳೆದಂತೆಲ್ಲ ಮಠದ ಶಾಖೋಪಶಾಖೆಗಳು ಬೆಳೆಯುತ್ತಿದ್ದವು. ಮಠಗಳ ವಿಸ್ತರಣೆ ಆದದ್ದು ಹೀಗೆ. ಕೆಲವೊಮ್ಮೆ ಒಂದು ಪ್ರದೇಶದ ಧರ್ಮಾಧ್ಯಕ್ಷರು ಅಥವಾ ದೊರೆಗಳು ಅಥವಾ ಕುಲೀನ ಶ್ರೀಮಂತರು ಮಠಗಳನ್ನು ಸ್ಥಾಪಿಸಿ ಅವುಗಳಿಗಾಗಿ ಧಾರಾಳ ದತ್ತಿಗಳನ್ನು ಕೊಡುತ್ತಿದ್ದರು. ಕ್ರಿ.ಶ.451ರಲ್ಲಿ ನಡೆದ ಕೈಸ್ತಧರ್ಮದ ವಿಶ್ವಸಮ್ಮೇಳನ ಮಠಗಳನ್ನು ಸ್ಥಾಪಿಸಲು ಧರ್ಮಾಧ್ಯಕ್ಷರ ಅಧಿಕೃತ ಅನುಮತಿಯನ್ನು ಪಡೆಯಬೇಕೆಂಬ ನಿಯಮವನ್ನು ಮಾಡಿತು.

	ಜೋಡಿಮಠಗಳು ಸಹ ಕೆಲವು ಪ್ರದೇಶಗಳಲ್ಲಿ ಇದ್ದುವು. ಸಂನ್ಯಾಸಿ-ಸಂನ್ಯಾಸಿನಿಯರು ಒಂದೇ ಅಧಿಕಾರಿಯ ಕೈಕೆಳಗೆ ಒಂದೇ ಮಠದಲ್ಲಿ ಇದ್ದುದುಂಟು. ಸ್ತ್ರೀ-ಪುರುಷರು ಒಂದೇ ಕಡೆಯಲ್ಲಿ ಇರುವುದರಿಂದ ಅಪ್ರಯಾಸವಾಗಿ ಉಂಟಾಗಬಹುದಾಗಿದ್ದ ಅಕ್ರಮಗಳನ್ನು ತಡೆಗಟ್ಟಲು ತೀವ್ರ ವಿಧಾನಗಳಿದ್ದುವು. ಜಸ್ಟಿನಿಯನ್ ಚಕ್ರವರ್ತಿ ಇಂಥ ಮಠಗಳನ್ನು ರದ್ದು ಮಾಡಿದನಾದರೂ ಇಂಗ್ಲೆಂಡ್, ಫ್ರಾನ್ಸ್ ಮತ್ತು ಸ್ಪೇನ್‍ಗಳಲ್ಲಿ ಅವು ಕೆಲಕಾಲ ಮುಂದುವರಿದುವು.

	ಗುಹೆ, ಗೋರಿ, ಗುಡಿಸಲುಗಳಷ್ಟೇ ಸೀಮಿತವಾಗಿದ್ದ ಪ್ರಾಚೀನ ಮಠಗಳು ಸಂನ್ಯಾಸಿಗಳ ಸಂಖ್ಯೆ ಬೆಳೆದಂತೆಲ್ಲ ಸುಸಜ್ಜಿತವೂ ವಿಶಾಲವೂ ಆಗುತ್ತ ಬಂದುವು. ಮಠದ ಸದಸ್ಯರೆಲ್ಲರೂ ಒಬ್ಬ ಹಿರಿಯನ ಅಧಿಕಾರಕ್ಕೆ ಒಳಪಟ್ಟು ನಿರ್ದಿಷ್ಟ ನಿಯಮಗಳಿಗನುಸಾರ ಬಾಳುವ ಪದ್ಧತಿ ರೂಢಿಗೆ ಬಂತು. ಕಟ್ಟಡಗಳ ರಚನೆಯಲ್ಲೂ ನಿರ್ದಿಷ್ಟ ರೂಪುರೇಖೆಗಳು ಬಳಕೆಗೆ ಬಂದುವು.

	ಪಾಶ್ಚಾತ್ಯ ದೇಶಗಳಲ್ಲಿ ಮಠಗಳ ಪ್ರಾಬಲ್ಯಕ್ಕೆ ಮುಖ್ಯ ಕಾರಣಕರ್ತ ಸಂತಬೆನೆದಿಕ್ತ್ (480-543) ಎಂಬ ಪ್ರಸಿದ್ಧ ಸಂನ್ಯಾಸಿ, ಈತ ಹಾಕಿ ಕೊಟ್ಟ ಸಂನ್ಯಾಸಿಗಳ ನಿಯಮಾವಳಿ ಬಹುಬೇಗ ಜನಪ್ರಿಯವಾಯಿತು. 520-700 ರ ವರೆಗೆ ಬಹಳ ಮಠಗಳು ಸ್ಥಾಪಿತವಾದುವು. 1415ರಲ್ಲಿ ಬೆನೆದಿಕ್ತನ ನಿಯಮಾವಳಿಯನ್ನು ಪಾಲಿಸುತ್ತಿದ್ದ ಮಠಗಳ ಸಂಖ್ಯೆ 15,000ಕ್ಕೂ ಹೆಚ್ಚಿತ್ತೆಂದು ತಿಳಿದುಬರುತ್ತಿದೆ.

	ಸಂತ ಬೆನೆದಿಕ್ತ್ ತನ್ನ ನಿಯಮಾವಳಿಯಲ್ಲಿ ಮಠದ ಕಟ್ಟಡದ ಯೋಜನೆಯ ರೂಪುರೇಖೆಗಳನ್ನು ಸಹ ಸೂಕ್ಷ್ಮವಾಗಿ ನಿರೂಪಿಸಿದ್ದಾನೆ. ಪ್ರಾರ್ಥನಾಲಯ, ಶಯ್ಯಾಗೃಹ, ಭೊಜನಾಲಯ, ಅಡುಗೆ ಮನೆ, ಕಾರ್ಯಾಗಾರಗಳು, ನೆಲಮಾಳಿಗೆಗಳು, ರೋಗಿಗಳಿಗೆ ವಿರಾಮಧಾಮ, ಅತಿಥಿಗೃಹ ಮತ್ತು ಗೋಷ್ಠಿಗಾಗಿ ಪ್ರಧಾನ ಕೊಠಡಿ ಇವೆಲ್ಲವೂ-ಆದರ್ಶಮಠದಲ್ಲಿ ಇರುತ್ತಿದ್ದವು. ಚೌಕಾಂಗಳದಲ್ಲಿ ಈ ಕಟ್ಟಡಗಳು ಇರುತ್ತಿದ್ದು, ಉತ್ತರದಲ್ಲಿ ದೇವಾಲಯ, ಸಂನ್ಯಾಸಿಗಳ ಸಾಮೂಹಿಕ ಪ್ರಾರ್ಥನಾಲಯಗಳೂ ಪಶ್ಚಿಮದಲ್ಲಿ ಗುರುಗೃಹ ಮತ್ತು ಕಿರುದೇವಾಲಯಗಳೂ ಇರುತ್ತಿದ್ದವು. ಗ್ರಂಥಗಳ ಸಂಖ್ಯೆ ಬೆಳೆದಂತೆ ಪುಸ್ತಕ ಭಂಡಾರ, ಅನಂತರ ಭೇಟಿ ಕೊಠಡಿ, ವ್ಯವಹಾರಗಳ ಕೊಠಡಿ, ಇತ್ಯಾದಿಗಳು ನಿರ್ಮಾಣವಾಗ ತೊಡಗಿದುವು. 

	ಕಾರ್ಥುಜಿಯನ್ ಮಠದ ಕಟ್ಟಡದ ಯೋಜನೆ ಸಾಮಾನ್ಯ ಮಠದ್ದಕ್ಕಿಂತ ಭಿನ್ನವಾಗಿರುತ್ತದೆ. ಅಲ್ಲಿಯ ಸಂನ್ಯಾಸಿಗಳು ಏಕಾಂತ ಯೋಗಿಗಳಾದ್ದರಿಂದ ಪ್ರತಿಯೊಬ್ಬನ ನಿವಾಸವೂ ಮೂರು ಕೊಠಡಿಗಳನ್ನೊಳಗೊಂಡ ಒಂದು ಗುಡಿಸಿಲಿನಂತಿರುತ್ತದೆ. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮವಿದ್ದಾಗ ಮತ್ತು ಕೆಲವೊಮ್ಮೆ ಎಲ್ಲ ಸಂನ್ಯಾಸಿಗಳೂ ಭೋಜನಾಲಯದಲ್ಲಿ ಒಟ್ಟು ಸೇರುವಾಗ ಮಾತ್ರ ಈ ಏಕಾಂತ ಯೋಗಿಗಳು ತಮ್ಮ ಗುಡಿಸಿಲಿನಿಂದ ಹೊರಬರುತ್ತಿದ್ದರು. ಚೌಕಾಂಗಳದ ಮೂರು ಪಕ್ಕಗಳಲ್ಲಿ ಇಂಥ ನಿವಾಸ ಸ್ಥಾನಗಳಿದ್ದು, ನಾಲ್ಕನೆಯ ಪಕ್ಕದಲ್ಲಿ ದೇವಾಲಯ, ಭೋಜನಶಾಲೆ, ಗೋಷ್ಠಿಗೃಹ ಹಾಗೂ ಇತರ ಕೊಠಡಿಗಳಿರುತ್ತವೆ.

	ಮಠಗಳ ಸುತ್ತಲೂ ಇರುವ ಎತ್ತರವಾದ ಪ್ರಾಕಾರಗಳು ಸಂಸಾರಿಗಳ ಪ್ರವೇಶಕ್ಕೂ ಅನುಮತಿ ಇಲ್ಲದೆ ಸಂನ್ಯಾಸಿಗಳ ನಿಷ್ಕ್ರಮಣಕ್ಕೂ ತಡೆಯಾಗಿದ್ದುವು. ಮಠವನ್ನು ಬಾಹ್ಯಜಗತ್ತಿನಿಂದ ಬೇರ್ಪಡಿಸುತ್ತಿದ್ದ ಈ ಎತ್ತರವಾದ ಗೋಡೆಗಳಿಗೆ ಹಿಂದಿನ ಕಾಲದ ಮಠದ ನಿವಾಸಿಗಳು ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುತ್ತಿದ್ದರು. ಪುರುಷರ ಮಠದೊಳಗೆ ಸ್ತ್ರೀಯರಿಗೆ ಪ್ರವೇಶ ನಿಷಿದ್ಧವಾಗಿತ್ತು. ಸ್ತ್ರೀಯರ ಮಠಗಳೊಳಗಡೆ ಪುರುಷರಿಗೆ ಪ್ರವೇಶಾವಾಕಾಶವಿರಲಿಲ್ಲ. ಪ್ರವೇಶ ಅತ್ಯವಶ್ಯವಿದ್ದಾಗ ವಿಶೇಷ ವ್ಯವಸ್ಥೆ ಮಾಡಬೇಕಾಗಿತ್ತು. ಅನುಭವಸ್ಥ ಸಂನ್ಯಾಸಿಯೊಬ್ಬ ದ್ವಾರಪಾಲಕನಾಗಿ ಹಾಗೂ ಒಳಹೊರಗಿನವರೊಡನೆ ಸಂಪರ್ಕ ಏರ್ಪಡಿಸುವ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದ.

	ಅತಿ ಪುರಾತನ ಕಾಲದಿಂದಲೂ ಮಠಗಳು ಅತಿಥಿ ಸತ್ಕಾರಕ್ಕೆ ಪ್ರಸಿದ್ಧಿ ಪಡೆದಿವೆ. ಮಠಗಳಲ್ಲಿ ಕುದುರೆ ಲಾಯ, ಆಸ್ಪತ್ರೆಗಳು, ಅತಿಥಿ ಗೃಹಗಳು, ಅತಿಥಿಗಳ ಉಪಚಾರಕ್ಕೆಂದೇ ಕಾಲಕ್ರಮೇಣ ನಿರ್ಮಿಸಿದ್ದಾಗಿವೆ.

	ಮಠಗಳು ಮೊದಲಿನಿಂದಲೂ ಸ್ವಸಂಪೂರ್ಣವಾಗಿದ್ದು ತಮ್ಮಲ್ಲಿಯೇ ಬೇಸಾಯ, ತೋಟಗಾರಿಕೆಗಳನ್ನು ಇಟ್ಟುಕೊಂಡಿದ್ದುವು. ಕಲೆಗಳ ವ್ಯಾಸಂಗ, ಹಸ್ತಪ್ರತಿ ಮಾಡುವ ಕಾರ್ಯ, ಹೊಲಿಗೆ ಪಾದರಕ್ಷೆಗಳ ಕಸಬು, ಮರಗೆಲಸ, ರೊಟ್ಟಿ ಮಾಡುವುದು ಇತ್ಯಾದಿ ಕೆಲಸ ಕಾರ್ಯಗಳಿಗೆ ಮಠದಲ್ಲಿ ಅವಕಾಶ ಕಲ್ಪಿಸಲಾಗುತ್ತಿತ್ತು. ಪ್ರತಿಯೊಂದು ಮಠವೂ ಒಂದು ಪುಟ್ಟ ನಗರವೇ ಆಗಿತ್ತು.

	ಆಧುನಿಕ ಕಾಲಧರ್ಮಕ್ಕನುಗುಣವಾಗಿ, ಅವಶ್ಯಕತೆಗಳಿಗನುಗುಣವಾಗಿ ಮಠಗಳ ಕಟ್ಟಡಗಳಲ್ಲಿ, ಸಂನ್ಯಾಸಿಗಳ ಜೀವನ ವಿಧಾನದಲ್ಲಿ, ನಿಯಮಾವಳಿಗಳಲ್ಲಿ ಮೂಲೋದ್ದೇಶಕ್ಕೆ ಭಂಗ ಬಾರದಂತೆ ಯಥೋಚಿತ ಮಾರ್ಪಾಟುಗಳನ್ನು ಮಾಡಲಾಗಿದೆ. 
												(ಡಿ.ವಿ.ಡಬ್ಲ್ಯು)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ